ಸಿಂಧೂ ಕಣಿವೆಯ ಲಿಪಿ, ಬ್ರಾಹ್ಮೀ ಲಿಪಿ ಮತ್ತು ಖರೋಷ್ಠಿ ಲಿಪಿಗಳು
ಪ್ರಾಚೀನ ಭಾರತದಲ್ಲಿ ಪ್ರಚಲಿತವಾಗಿದ್ದ ಮೂರು ಪ್ರಮುಖ ಲಿಪಿಗಳು. ಎಲ್ಲ ಆಧುನಿಕ ಭಾರತೀಯ ಭಾಷೆಗಳ
ಲಿಪಿಗಳೂ ಕೂಡ, ಈ ಮೂರರಲ್ಲಿ ಒಂದಲ್ಲ ಒಂದು ಲಿಪಿಯಿಂದ ಒಡಮೂಡಿದ್ದು, ಶತಮಾನಗಳ ಬೆಳವಣಿಗೆಯ ನಂತರ,
ಈಗ ಬಳಕೆಯಲ್ಲಿರುವ ರೂಪಗಳನ್ನು ಪಡೆದಿವೆ. ಕನ್ನಡ ಲಿಪಿಯು ಬ್ರಾಹ್ಮಿಯಿಂದ ಮೂಡಿಬಂದಿರುವ ಲಿಪಿಗಳಲ್ಲಿ
ಒಂದು. ಬ್ರಾಹ್ಮೀ ಲಿಪಿ, (ಕ್ರಿಸ್ತಪೂರ್ವ ಮೂರನೆಯ ಶತಮಾನ) ಇನ್ನಷ್ಟು ಖಚಿತವಾಗಿ ಹೇಳುವುದಾದರೆ,
ಅದರ ದಾಕ್ಷಿಣಾತ್ಯ ಪ್ರಭೇದವು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಸಿಕ್ಕಿರುವ ಆಶೋಕನ ಶಾಸನಗಳಲ್ಲಿ
ಬಳಕೆಯಾಗಿದೆ. ಸನ್ನತಿ, ಬ್ರಹ್ಮಗಿರಿ, ಚಂದ್ರವಳ್ಳಿ, ಕೊಪ್ಪಳದ ಗವಿ ಮಠ, ಸಿದ್ದಾಪುರ ಮತ್ತು ಮಸ್ಕಿಗಳು
ಅಂತಹ ಸ್ಥಳಗಳಲ್ಲಿ ಕೆಲವು. ಇದು ಎಡದಿಂದ ಬಲಕ್ಕೆ ಬರೆಯಬೇಕಾದ ಲಿಪಿ. ಸಹಜವಾಗಿಯೇ, ಕನ್ನಡ ಕೂಡ ಅದೇ
ಮಾದರಿಯನ್ನು ಅನುಸರಿಸಿದೆ. ಲಿಪಿಯು ವಿಕಾಸವಾಗುವ ರೀತಿಯು ಅನೇಕ ಸಂಗತಿಗಳನ್ನು ಅವಲಂಬಿಸಿರುತ್ತದೆ.
ಲೇಖನ ಸಾಮಗ್ರಿ (ಕಲ್ಲು, ತಾಮ್ರ, ಓಲೆಗರಿ, ತಾಮ್ರ ಇತ್ಯಾದಿ) ಬರೆಯುವ ಸಲಕರಣೆಗಳು, (ಕಂಟ, ಬಳಪ,
ಲೇಖನಿ, ಮುದ್ರಣ ಇತ್ಯಾದಿ) ಬರೆಯುವ ವಿಧಾನಗಳು, ಲಿಪಿಕಾರರ ಹಿನ್ನೆಲೆ ಮುಂತಾದವು ಇವುಗಳಲ್ಲಿ ಕೆಲವು.
ತಂತ್ರಜ್ಞಾನದಲ್ಲಿ ಆಗುವ ಮುನ್ನಡೆಯ ಫಲವಾಗಿ ಉಂಟಾದ/ಉಂಟಾಗುವ ಕಾಗದದ ಅನ್ವೇಷಣೆ, ಮುದ್ರಣ, ಬೆರಳಚ್ಚು, ಕಂಪ್ಯೂಟರುಗಳು
ಮುಂತಾದವು ಕಾಲಾನುಕ್ರಮದಲ್ಲಿ ತಮ್ಮದೇ ಆದ ಪ್ರಭಾವವನ್ನು ಬೀರಿವೆ. ಬ್ರಾಹ್ಮೀ ಲಿಪಿಯ ಉಗಮದ ಬಗ್ಗೆ,
ಲಿಪಿಶಾಸ್ತ್ರಜ್ಞರಲ್ಲಿ ಬಿಸಿಬಿಸಿಯ ವಾಗ್ವಾದಗಳು ನಡೆದಿವೆ. ಕೆಲವರು ಅದು ಭಾರತಕ್ಕೆ ಹೊರಗಿನಿಂದ
ಬಂತೆಂದು ಹೇಳಿದರೆ, ಬೇರೆ ಕೆಲವರು ಅದು ಇಲ್ಲಿಯೇ ಹುಟ್ಟಿತೆಂದು ವಾದಿಸಿದ್ದಾರೆ.
ಕನ್ನಡ ಲಿಪಿಯು,
ಬ್ರಾಹ್ಮಿಯ ಮೂಲಮಾದರಿಯಿಂದ ಸಾಕಷ್ಟು ದೂರ ಪ್ರಯಾಣಮಾಡಿದೆ. ಶಾತವಾಹನರು, ಕದಂಬರು, ಗಂಗರು, ಚಾಳುಕ್ಯರು,
ರಾಷ್ಟ್ರಕೂಟರು, ಹೊಯ್ಸಳರು ಮತ್ತು ಅವರ ಅನಂತರ ಬಂದ ರಾಜವಂಶಗಳ ಆಳ್ವಿಕೆಯಲ್ಲಿ, ಅದು ಅನೇಕ ಮಹತ್ವದ
ಬದಲಾವಣೆಗಳನ್ನು ಪಡೆದುಕೊಂಡಿದೆ. ಬರವಣಿಗೆಯ ವಿಧಾನಗಳ ಪರಿಣಾಮವಾಗಿ ಕಾಣಿಸಿಕೊಂಡ ಪ್ರಾದೇಶಿಕ ವ್ಯತ್ಯಾಸಗಳನ್ನು
ಕ್ರಮೇಣ ಒಪ್ಪಿಕೊಳ್ಳಲಾಯಿತು. ಇಡೀ ದೇಶಕ್ಕೆ ಅನ್ವಯವಾಗುವ ಒಂದು ಮಾದರಿಯು ಮೂಡಿಬರಲಿಲ್ಲ. ಬ್ರಾಹ್ಮೀಲಿಪಿಯ
ಅನೇಕ ಅಕ್ಷರಗಳನ್ನು ಉತ್ತರ ಭಾರತದಲ್ಲಿ ಬರೆಯುವ ರೀತಿಗೂ ದಕ್ಷಿಣ ಭಾರತೀಯರು ಬರೆಯುವ ರೀತಿಗೂ ವ್ಯತ್ಯಾಸಗಳು
ಕಾಣಿಸಿಕೊಂಡಿವೆ.
ಮೊದಲ ಹಂತದಲ್ಲಿ,
ಚೌಕಾಕಾರದ, (squarelike)
ಕೋನಗಳನ್ನು ಹೊಂದಿರುವ (angular) ಅಕ್ಷರಗಳ ಬದಲಾಗಿ, ಬಾಗುರೇಖೆಗಳು((curves) ಮತ್ತು ಅಲಂಕರಿತ
(decorative) ಅಕ್ಷರಗಳು ಕಾಣಿಸಿಕೊಂಡವು. ಆದರೆ, ಈ
ಬದಲಾವಣೆಗಳು ಏಕಪ್ರಕಾರದವೂ ಏಕಮುಖವಾದವೂ
ಆಗಿದ್ದವೆಂದು ತಿಳಿಯುವ ಅಗತ್ಯವಿಲ್ಲ. ಉದಾಹರಣೆಗೆ ಬಹಳ
ಮೃದುವಾದ ಬಳಪದಕಲ್ಲನ್ನು (ಸೋಪ್ ಸ್ಟೋನ್) ಬಳಸಿದ ಹೊಯ್ಸಳರ ಕಾಲದ ಲಿಪಿಯು ಬಹಳ ಅಲಂಕರಿತವಾಗಿತ್ತು.
ಆದರೆ, ಅವರ ನಂತರ ಬಂದ ವಿಜಯನಗರದ ದೊರೆಗಳ ಕಾಲದಲ್ಲಿ ಬಹಳ ಬಿರುಸಾದ ಗ್ರಾನೈಟ್ ಕಲ್ಲಿನ ಬಳಕೆ ಹೆಚ್ಚು.
ಪರಿಣಾಮವಾಗಿ ಅವರ ಕಾಳದ ಲಿಪಿಯು ಅಷ್ಟೇನೂ ಅಲಂಕರಿತವಲ್ಲ.
ಕರ್ನಾಟಕದಲ್ಲಿ ಬ್ರಾಹ್ಮೀ ಲಿಪಿಯ ಬೆಳವಣಿಗೆಯ ಎರಡನೆಯ ಹಂತವನ್ನು,
ಬನವಾಸಿ, ಮಳವಳ್ಳಿ ಮತ್ತು ಮ್ಯಾಕದೋಣಿಯ ಶಾಸನಗಳಲ್ಲಿ ನೋಡಬಹುದು. (ಕ್ರಿ.ಶ. 2-3 ಶತಮಾನಗಳು)
ಕದಂಬರ ಕಾಲದ ಶಾಸನಗಳಲ್ಲಿ ಬಳಸಿರುವ ಲಿಪಿಯನ್ನು ಕನ್ನಡ ಲಿಪಿಯ
ಅತಿ ಪ್ರಾಚೀನ ಮಾದರಿಯೆಂದು ಗುರುತಿಸಲಾಗಿದೆ. ಎಂದರೆ, ಇದನ್ನು ಬ್ರಾಹ್ಮೀಲಿಪಿಗಿಂತ ಭಿನ್ನವೆಂದು
ಗುರುತಿಸಲು ಸಾಧ್ಯ. ಆ ವೇಳೆಗಾಗಲೇ ಕನ್ನಡದಲ್ಲಿ ಮತ್ತು ಅದಕ್ಕೆ ಸಮಕಾಲಿಕವಾದ ಗುಪ್ತರ ಲಿಪಿಯಲ್ಲಿ
ಚೌಕಾಕೃತಿಯ ತಲೆಕಟ್ಟುಗಳನ್ನು ಬಳಸುತ್ತಿದ್ದರು. ಈ ಅಕ್ಷರಗಳ ಎತ್ತರ ಕಡಿಮೆ ಮತ್ತು ಅವು ಈಗಾಗಲೇ ವರ್ತುಲಾಕಾರದ
ಬಾಗುರೇಖೆಗಳನ್ನು ಒಳಗೊಂಡಿವೆ. ಮಯೂರಶರ್ಮನ ಚಂದ್ರವಳ್ಳಿ ಶಾಸನ, ಕಾಕುಸ್ಥವರ್ಮನ ಹಲ್ಮಿಡಿ ಶಾಸನ ಮತ್ತು
ಅದೇ ಕಾಕುಸ್ಥವರ್ಮನ ತಾಳಗುಂದದ ಶಾಸನಗಳು ಈ ಕಾಲಕ್ಕೆ ಸೇರುತ್ತವೆ. ಮೃಗೇಶವರ್ಮನ ತಾಮ್ರಶಾಸನಗಳನ್ನೂ
ಇದೇ ಗುಂಪಿಗೆ ಸೇರಿಸಬಹುದು.
ಕರ್ನಾಟಕದ
ದಕ್ಷಿಣ ಭಾಗದಲ್ಲಿ ರಾಜ್ಯಭಾರ ಮಾಡಿದ ಗಂಗ ದೊರೆಗಳ ಶಾಸನಗಳಲ್ಲಿ, ಚೌಕಾಕೃತಿಯ ಅಥವಾ ತ್ರಿಕೋನಾಕಾರದ
ತಲೆಕಟ್ಟುಗಳಿಲ್ಲ. ಈ ಅಕ್ಷರಗಳ ಕೆಳಭಾಗವು ಹೆಚ್ಚು ಅಗಲವಾಗಿಯೂ ಎತ್ತರವಾಗಿಯೂ ಇವೆ. ಗಂಗರ ಕಾಲದ ತಾಮ್ರಶಾಸನಗಳಲ್ಲಿ
ಒಂದೇ ಅಕ್ಷರವನ್ನು ಒಂದಕ್ಕಿಂತ ಹೆಚ್ಚು ಬಗೆಗಳಲ್ಲಿ ಬರೆಯಲಾಗಿದೆ. ಗಂಗ ದೊರೆಗಳು ಅನೇಕ ಶತಮಾನಗಳ
ಕಾಲ ರಾಜ್ಯಭಾರ ಮಾಡಿದುದರಿಂದ, ಬೇರೆ ಬೇರೆ ಕಾಲಘಟ್ಟಗಳಲ್ಲಿ ನಿಲ್ಲಿಸಲಾದ ಅವರದೇ ಶಾಸನಗಳಲ್ಲಿ ಲಿಪಿವ್ಯತ್ಯಾಸಗಳಿವೆ.
ಬಾದಾಮಿ ಚಾಳುಕ್ಯರ ಶಾಸನಗಳನ್ನು ಮಂಗಳೀಶ, ಪುಲಿಕೇಶಿ ಮುಂತಾದ
ದೊರೆಗಳು ಸ್ಥಾಪಿಸಿದ್ದಾರೆ. ಇಲ್ಲಿ, ತಲಕಟ್ಟು ಬಹುಮಟ್ಟಿಗೆ ಒಂದು ಸರಳರೇಖೆಯಂತೆ ನೇರವಾಗಿದೆ. ಏಳನೆಯ
ಶತಮಾನದ ವೇಳೆಗಾಗಲೇ ಯ, ರ, ಸ, ಹ, ದ ಮುಂತಾದ ಅಕ್ಷರಗಳು ತಮ್ಮ ಅಂತಿಮ ರೂಪವನ್ನು ಪಡೆದು ಸ್ಥಿರವಾಗಿರುವಂತೆ
ತೋರುತ್ತದೆ.
ಬಾದಾಮಿ ಚಾಳುಕ್ಯರ ಕಾಲದಲ್ಲಿ ಮೊದಲಾದ ಸ್ಥಿರೀಕರಣದ ಕ್ರಿಯೆಯು,
ರಾಷ್ಟ್ರಕೂಟರ ಆಳ್ವಿಕೆಯ ಮೂರು ಶತಮಾನಗಳಲ್ಲಿ ಇನ್ನಷ್ಟು ತೀವ್ರವಾಯಿತು. ಈ ಅವಧಿಯಲ್ಲಿ ಅ, ಆ, ಎ,
ಕ ಮತ್ತು ಖ ಗಳು ತಮ್ಮ ಅಂತಿಮ ರೂಪವನ್ನು ಪಡೆದುಕೊಂಡಂತೆ ಕಾಣುತ್ತದೆ.
ಕಲ್ಯಾಣಿ ಚಾಳುಕ್ಯರ ಆಳ್ವಿಕೆಯ ಕಾಲದಲ್ಲಿ ಕೆಲವು ಮುಖ್ಯವಾದ
ಬದಲಾವಣೆಗಳಿಗೆ ಪಕ್ಕಾಯಿತು. ಈ ಪ್ರಭೇದವನ್ನು, ಬ್ಹೂಲರ್, ಫ್ಲೀಟ್ ಮುಂತಾದ ಲಿಪಿಶಾಸ್ತ್ರಜ್ಞರು,
ಹಳಗನ್ನಡ ಲಿಪಿಯೆಂದು ಕರೆದಿದ್ದಾರೆ. ಈ ಅವಧಿಯಲ್ಲಿ ಅಕ್ಷರಗಳು ಇನ್ನಷ್ಟು ವರ್ತುಲಾಕಾರವನ್ನು ಪಡೆದವು.
ಇ, ಗ, ಘ, ಯ, ಲ ಮತ್ತು ವ ಅಕ್ಷರಗಳು ತಮ್ಮ ಅಂತಿಮ ರೂಪಕ್ಕೆ ಬಹಳ ಹತ್ತಿರವಾದವು. ಣ ಮತ್ತು ಭ ಗಳು
ಹೊಸ ಆಕೃತಿಯನ್ನು ಪಡೆದುಕೊಂಡವು. ಅದುವರೆಗೆ ಕೇವಲ ನಾಮಕಾವಾಸ್ತೆಗೆ ಇರುತ್ತಿದ್ದ ತಲಕಟ್ಟು, ಈಗ ಖಚಿತವಾದ
ಬಾಗುಗೆರೆಯ ಾಕಾರ ಪಡೆಯಿತು.
ಹೊಯ್ಸಳರು, ಕಳಚುರಿಗಳು ಮತ್ತು ಸೇವುಣರ ಕಾಲದ ಲಿಪಿಗಳು, ಬಹುಮಟ್ಟಿಗೆ
ಕಲ್ಯಾಣಿ ಚಾಳುಕ್ಯರ ಮಾದರಿಯನ್ನೇ ಅನುಸರಿಸಿದವು. ಹೆಚ್ಚೆಂದರೆ, ಲಿಪಿವಿನ್ಯಾಸಗಳು ಇನ್ನಷ್ಟು ಅಲಂಕರಿತವಾದವು.
ಈಗಾಗಲೇ ಹೇಳಿದಂತೆ, ಮೃದುವಾದ ಸೋಪ್ ಸ್ಟೋನ್ ಅನ್ನು ಬಳಸಿದ ಹೊಯ್ಸಳರ ಶಾಸನಗಳಲ್ಲಿ, ಅಕ್ಷರಗಳು ಬಹಳ
ಗುಂಡಗಿದ್ದು, ಅಲಂಕರಿತವಾಗಿವೆ.
ಇದಕ್ಕೆ ವಿರುದ್ಧವಾಗಿ
ಬಹಳ ಗಟ್ಟಿಯಾದ ಗ್ರಾನೈಟ್ ಕಲ್ಲನ್ನು ಲೇಖನಸಾಮಗ್ರಿಯಾಗಿ ಬಳಸಿದ ವಿಜಯನಗರದ ಅರಸುಗಳ ಕಾಲದಲ್ಲಿ, ಅಕ್ಷರಗಳು
ಕಡಿಮೆ ಸುಂದರವಾದವು. ಅವು ಒರಟಾಗಿಯೂ ಅನಾಕರ್ಷಕವಾಗಿಯೂ ಕಂಡವು. ಮಹಾಪ್ರಾಣಾಕ್ಷರಗಳನ್ನು ಹೊಕ್ಕಳು
ಸೀಳುವುದರ ಮೂಲಕ ಸೂಚಿಸುವ ಪದ್ಧತಿಯು ಈ ಕಾಲದಲ್ಲೇ
ಮೊದಲಾಯಿತು. (ಥ, ಧ, ಢ, ಫ)
ಎಲ್ಲೋ ಕೆಲವು
ಅಪವಾದಗಳನ್ನು ಬಿಟ್ಟರೆ, ಮೈಸೂರು ಒಡೆಯರ ಕಾಲದ ಶಾಸನಗಳ ಲಿಪಿಗೂ ಈಗ ನಾವು ಬಳಸುತ್ತಿರುವ ಲಿಪಿಗೂ
ಅಂತಹ ವ್ಯತ್ಯಾಸವೇನೂ ಇಲ್ಲ. ಆ ಕೆಲವು ಅಕ್ಷರಗಳು, ಅಲಂಕರಿತವಾಗಿಯೇ ಉಳಿದವು.ಅನುನಾಸಿಕ ವ್ಯಂಜನಗಳನ್ನು
ಸೂಚಿಸಲು ಬಳಸುವ ಬಿಂದು ಅಥವಾ ಅನುಸ್ವಾರವನ್ನು (ಸೊನ್ನೆ) ಸಂಬಂಧಪಟ್ಟ ಅಕ್ಷರದ ಮುಂದೆ ಬರೆಯಲಾಗುತ್ತದೆ.
ವ್ಯಂಜನ ಮತ್ತು ಸ್ವರಗಳ ಸಂಯೋಜನೆಯಾದ ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳನ್ನು ಕಾಲಕ್ರಮದಲ್ಲಿ
ಬೆಳೆದುಬಂದಿರುವ ವಿಧಾನಗಳಲ್ಲಿ ಸೂಚಿಸಲಾಗುತ್ತದೆ.
ತೆಲುಗು ಲಿಪಿಗೂ ಕನ್ನಡ ಲಿಪಿಗೂ ನಡುವೆ ಅನೇಕ ಹೋಲಿಕೆಗಳಿವೆ.
ಯಾವುದೋ ಒಂದು ಹಂತದಲ್ಲಿ ಅವೆರಡೂ ಭಾಷೆಗಳಿಗೆ ಸಮಾನವಾದ ಲಿಪಿಯೇ ಇತ್ತೆಂದು ಭಾಷಾಶಾಸ್ತ್ರಜ್ಞರು ಅಭಿಪ್ರಾಯ
ಪಟ್ಟಿದ್ದಾರೆ. ಕನ್ನಡವು ತಾನು ಬಳಸುವ ಅಚ್ಚಗನ್ನಡ (ದ್ರಾವಿಡ) ಧ್ವನಿಗಳಿಗೆ, ಅಂತೆಯೇ ತನ್ನೊಳಗೆ
ಬಳಕೆಗೆ ಬಂದಿರುವ ಸಂಸ್ಕೃತ ಧ್ವನಿಗಳಿಗೆ ಸೂಕ್ತವಾದ ಲಿಪಿಪ್ರತಿನಿಧಿಗಳನ್ನು ರೂಪಿಸಿಕೊಂಡಿದೆ. ಪರಿಣಾಮವಾಗಿ,
ಕನ್ನಡಲಿಪಿಯ ಅಕ್ಷರಗಳಿಗೂ ಅವುಗಳನ್ನು ಉಚ್ಚರಿಸುವ ರೀತಿಗೂ ಸಾಕಷ್ಟು ಹೋಲಿಕೆಯಿದೆ.ಕನ್ನಡ ಲಿಪಿಯು
ಬೇರೆ ಬೇರೆ ರಾಜವಂಶಗಳ ಅವಧಿಯಲ್ಲಿ ಪಡೆದುಕೊಂಡ ರೂಪಗಳನ್ನು, ಹಲವಾರು ಪಟ್ಟಿಕೆಗಳ ರೂಪದಲ್ಲಿ, ಈ ಟಿಪ್ಪಣಿಗೆ
ಅನುಬಂಧವಾಗಿ ಕೊಡಲಾಗಿದೆ.
ಮುಂದಿನ ಓದು ಮತ್ತು ಲಿಂಕುಗಳು:
-
Evolution of Kannada from Brahmee script - Pictorial
- ‘ಲಿಪಿಯ
ಹುಟ್ಟು ಮತ್ತು ಬೆಳವಣಿಗೆ’,
ಡಾ. ದೇವರಕೊಂಡಾ ರೆಡ್ಡಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
- ‘ಕನ್ನಡ
ಲಿಪಿಯ ಉಗಮ ಮತ್ತು ವಿಕಾಸ’,
ಎ.ವಿ. ನರಸಿಂಹಮೂರ್ತಿ, 1968, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.
- ‘The
Dravidian Languages’, By Bhadriraju Krishnamurty,
2003, Cambridge Language Surveys, Cambridge
University Press.